Saturday, December 28, 2019

ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಏನು‌ಹೇಳುತ್ತೆ ಗೊತ್ತಾ?

ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ.

A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. ಯಾವಾಗಲೂ ಸಾಹಸ ಹಾಗೂ ಚಟುವಟಿಕೆಗೆ ಹುಡುಕುವ ಸ್ವಭಾವ ನಿಮ್ಮದು. ನಿಮ್ಮ ಕೌಶಲ್ಯಗಳ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆ.

B: ಬಿ ಲೆಟರ್‌ನಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚಾಗಿ ನಿಮ್ಮ ಭಾವನೆಗಳನ್ನು ಹಾಗೂ ಯೋಚನೆಗಳನ್ನು ಚೆಕ್ ಮಾಡುತ್ತಲೇ ಇರುತ್ತೀರಿ. ಜನರನ್ನು ಕಾಳಜಿಯಿಂದ ಹ್ಯಾಂಡಲ್ ಮಾಡುವುದು ಹೇಗೆಂದು ನಿಮಗೆ ಗೊತ್ತು. ಆದರೆ, ನೆಗೆಟಿವ್ ಸೈಡೆಂದರೆ ನೀವು ಸ್ವಲ್ಪ ಸ್ವಾರ್ಥಿಯೂ, ದುರಾಸೆಯವರೂ ಆಗಬಲ್ಲಿರಿ,

C: ನೀವು ಹೆಚ್ಚು ಪ್ರತಿಭಾವಂತರಾಗಿದ್ದು, ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲಿರಿ. ಪ್ರಾಮಾಣಿಕತೆಗೆ ಹೆಚ್ಚು ಬೆಲೆ ಕೊಡುತ್ತೀರಿ. ಹುಟ್ಟು ಮಾತುಗಾರರಾಗಿರುವ ನೀವು ಕೆಲವೊಮ್ಮೆ ಹೆಚ್ಚು ಇಂಪಲ್ಸಿವ್ ಆಗಿ ವರ್ತಿಸುತ್ತೀರಿ.

D: ನೀವು ಸಮತೋಲನ, ಭದ್ರತೆ ಹಾಗೂ ಹಾರ್ಡ್ ವರ್ಕನ್ನು ಪ್ರತಿನಿಧಿಸುತ್ತೀರಿ. ಯಾವಾಗಲೂ ಸ್ವಚ್ಛತೆ ಹಾಗೂ ಜೋಡಣೆಗೆ ಮಹತ್ವ ನೀಡುತ್ತೀರಿ. ನಿಮಗೆ ಜೀವನದಲ್ಲಿ ಗುರಿ ಹಾಗೂ ಉದ್ದೇಶ ತಿಳಿದಿರುತ್ತಾದ್ದರಿಂದ ಹುಟ್ಟಾ ನಾಯಕರಂತಿರುತ್ತೀರಿ. ಆದರೆ ಕೆಲವೊಮ್ಮೆ ಅತಿಯಾದ ಹಟ ಹಿಡಿದು ಇತರರನ್ನು ಪೀಡಿಸಬಲ್ಲಿರಿ.‌

E: ಪ್ರೀತಿ ಹಾಗೂ ಸನ್ನಡತೆ ನಿಮ್ಮ ಸ್ವಭಾವ. ಕಷ್ಟದ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಜೀವನವನ್ನು ಚೆನ್ನಾಗಿ ಗಮನಿಸಿ ತಕ್ಷಣ ಯೋಚಿಸಿ ನಿರ್ಧರಿಸಬಲ್ಲ ಗುಣ ನಿಮ್ಮಲ್ಲಿದೆ. ನೀವೆಲ್ಲೇ ಹೋದರೂ ಹೆಚ್ಚು ಗೆಳೆಯರನ್ನು ಸಂಪಾದಿಸುತ್ತೀರಿ. ನೆಗೆಟಿವ್ ಸೈಡ್ ಎಂದರೆ ಸ್ವಲ್ಪ ಹೆಚ್ಚು ಫ್ಲರ್ಟ್ ಮಾಡುವ ಹಾಗೂ ಸಮಯ ಪಾಲನೆ ಮಾಡದ ಅಭ್ಯಾಸ.

F: ಸ್ವಭಾವತಃ ನೀವು ಮನೆಗುಬ್ಬಿ. ಕುಟುಂಬಕ್ಕೆ ಹೆಚ್ಚು ಮಹತ್ವ ಕೊಟ್ಟು ಜವಾಬ್ದಾರಿ ತೆಗೆದುಕೊಳ್ಳುತ್ತೀರಿ. ವೈಯಕ್ತಿಕ ಸಂಬಂಧಕ್ಕೆ ಬಂದರೆ ಸಿಕ್ಕಾಪಟ್ಟೆ ರೊಮ್ಯಾಂ
ಟಿಕ್ ಹಾಗೂ ಅತಿಯಾದ ಬದ್ಧತೆ ತೋರುತ್ತೀರಿ. ಕೆಲವೊಮ್ಮೆ ಚೈಲ್ಡಿಶ್ ಆಗಿ ಆಡಬಹುದು.

G: ಯಾರಾದರೂ ಸಲಹೆ ನೀಡಿದರೆ ಮಧ್ಯೆ ಮೂಗು ತೂರಿಸುತ್ತಿದ್ದಾರೆ ಎಂದು ನಿಮಗೆ ಕೋಪ ಬರುತ್ತದೆ. ನೀವು ಆವಿಷ್ಕಾರ ಮನಸ್ಥಿತಿಯುಳ್ಳವರು. ನಿಮ್ಮ ಜೀವನವನ್ನು ನಿಮಗಿಷ್ಟ ಬಂದಂತೆ ಬದುಕಲು ಬಯಸುವವರು. ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದಾಗಿ ಬಹುಬೇಗ ಸತ್ಯವನ್ನು ಹುಡುಕಬಲ್ಲಿರಿ.

H : ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡುವ ನೀವು ಅತಿಯಾದ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದು, ಹಣಕಾಸು ನಿಮ್ಮ ಕೈಲಿ ನಿಲ್ಲುತ್ತದೆ. ಹುಟ್ಟಾ ಉದ್ಯಮಿಯ ಗುಣಗಳಿದ್ದು, ಉತ್ತಮ ಲೀಡರ್ ಆಗಬಹುದು. ತಾಳ್ಮೆ ಹಾಗೂ ಸೂಕ್ಷ್ಮತೆ ಹೊಂದಿರುತ್ತೀರಿ. ನೆಗೆಟಿವ್ ಸೈಡೆಂದರೆ ಸಂಬಂಧಗಳ ವಿಷಯದಲ್ಲಿ ಅತಿಯಾದ ಪೊಸೆಸಿವ್ನೆಸ್ ಹೊಂದಿರುತ್ತೀರಿ.

I: ಅತ್ಯಂತ ಒಳ್ಳೆಯ ಆತ್ಮ ನಿಮ್ಮದು. ನೀವು ಹೆಚ್ಚು ಅವಲಂಬಿತರು ಹಾಗೂ ಅತಿಯಾಗಿ ಯೋಚಿಸುವವರು. ಇನ್ನೊಬ್ಬರ ಕಷ್ಟಗಳಿಗೆ ಮರುಗುತ್ತಾ ಸಾಧ್ಯವಾದಷ್ಟು ಸಹಾಯ ಮಾಡುತ್ತೀರಿ. ಸಣ್ಣಪುಟ್ಟದ್ದಕ್ಕೂ ಕೊರಗುವುದು ನಿಮ್ಮ ವೀಕ್ನೆಸ್.

J : ಅತಿಯಾದ ಮಹತ್ವಾಕಾಂಕ್ಷೆ ಹೊಂದಿರುವ ನೀವು ಜೀವನದಲ್ಲಿ ಬೇಕಾದ್ದನ್ನೆಲ್ಲ ಪಡೆದೇ ತೀರುವ ಛಲ ತೋರಿಸುತ್ತೀರಿ. ಅರ್ಥ ಮಾಡಿಕೊಳ್ಳುವ ಪಾರ್ಟ್ನರ್ ಸಿಕ್ಕರೆ ಸಂತೋಷವಾಗಿರಬಲ್ಲಿರಿ.

K: ಅಕ್ಷರದಿಂದ ಹೆಸರು ಆರಂಭ ಆಗುವ ವ್ಯಕ್ತಿಗಳು ರಹಸ್ಯಗಳನ್ನು ಕಾಪಾಡಿಕೊಳ್ಳುವಂಥವರು. ನಾಚಿಕೆ ಸ್ವಭಾವ ಇರುತ್ತದೆ. ಆದರೂ ಬಹಳ ಸನ್ನಿವೇಶದಲ್ಲಿ ಇವರೇ ಆಕರ್ಷಣೆಯ ಕೇಂದ್ರ ಬಿಂದು ಆಗುತ್ತಾರೆ. ಜೀವನದಲ್ಲಿ ಸಮತೋಲನ ಹಾಗೂ ಸೌಹಾರ್ದ ಬಯಸುವಂಥವರು. ರಾಜೀ- ಸಂಧಾನ ಮಾಡಿಸುವಲ್ಲಿ ಇವರದು ಎತ್ತಿದ ಕೈ. ಇತರರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಸಂಬಂಧಗಳ ವಿಚಾರದಲ್ಲಿ ಆಟ ಆಡುವ ಪೈಕಿ ಇವರಲ್ಲ. ಬಾಳಸಂಗಾತಿಯ ಮಮಕಾರವನ್ನು ನಿರೀಕ್ಷೆ ಮಾಡುವ ಇವರಿಗೆ ಅದು ಸಿಕ್ಕರೆ ಅದ್ಭುತವಾದದ್ದನ್ನು ಸಾಧಿಸುತ್ತಾರೆ.
L: ನೀವು ಜೀವನವನ್ನು ಬಹಳ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೀರಿ. ಅದಕ್ಕೇ ನೀವು ಉಳಿದವರಿಗಿಂತ ವಿಶಿಷ್ಠರೆನಿಸುತ್ತೀರಿ. ನಿಮಗೆ ನಿಮ್ಮ ಸಂಗಾತಿ ಎಂದರೆ ಜೀವ. ಒಳ್ಳೆಯ ಹಾಸ್ಯಪ್ರಜ್ಞೆ ಹೊಂದಿರುವ ನೀವು ಸಾಮಾನ್ಯವಾಗಿ ತಮಾಷೆ ಮಾಡುತ್ತಾ ಖುಷಿಯಾಗಿರಬಲ್ಲಿರಿ.

M: ನೀವು ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವಂಥವರು. ಎಂ ಲೆಟರ್‌ನಿಂದ ಹೆಸರು ಆರಂಭವಾಗುವ ಜನರು ಸಾಮಾನ್ಯವಾಗಿ ವರ್ಕೋಹಾಲಿಕ್ಸ್. ಅವರು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಮಾತನಾಡುವುದಿಲ್ಲ. ಆದರೆ, ತಾಳ್ಮೆ ಪರೀಕ್ಷಿಸಿದರೆ ಹೆಚ್ಚು ಅಗ್ರೆಸಿವ್ ಆಗಬಲ್ಲಿರಿ.

N: ಏನೇ ಮಾಡಿದರೂ ಅದರಲ್ಲಿ ಪರ್ಫೆಕ್ಷನ್ ಇರಬೇಕು ಎನ್ನುವವರು ನೀವು. ಹುಟ್ಟಿನಿಂದಲೇ ಸಂವಹನ ಕಲೆ ಸಿದ್ದಿಸಿರುತ್ತದೆ. ಜನರನ್ನು ಫಾಲೋ ಮಾಡುವ ಬದಲು ನಿಮ್ಮದೇ ದಾರಿಯಲ್ಲಿ ನಡೆಯಲಿಚ್ಚಿಸುವಿರಿ.

O: ಬಹಳ ಕರುಣೆ ಹಾಗೂ ಪ್ರೀತಿಯುಳ್ಳವರು. ಅತಿ ನಂಬಿಕಸ್ಥ ಜನಗಳಲ್ಲಿ ಒಬ್ಬರಾಗಿರುತ್ತೀರಿ. ನಿಮ್ಮದೇ ಆದ ಸಿದ್ಧಾಂತಗಳಿಗನುಗುಣವಾಗಿ ಬದುಕಲು ಬಯಸುತ್ತೀರಿ. ನಿಮ್ಮ ಈ ಪ್ರೀತಿಯ ಗುಣವೇ ನೀವು ಹೋದಲ್ಲೆಲ್ಲ ಜನಪ್ರಿಯರಾಗುವಂತೆ ಮಾಡುತ್ತದೆ.

P: ಬದುಕಿನ ಬಗ್ಗೆ ಹೆಚ್ಚು ಕುತೂಹಲ ಉಳ್ಳವರು. ಹಟವಾದಿ, ನಿಮ್ಮ ಸುತ್ತಲಿನವರನ್ನು ಖುಷಿಯಾಗಿಡಲು ಸದಾ ಪ್ರಯತ್ನಿಸುತ್ತೀರಿ. ಹಾಸ್ಯಪ್ರಜ್ಞೆ ಚೆನ್ನಾಗಿರುತ್ತದೆ. ಆದರೆ ಕೆಲವೊಮ್ಮೆ ಸ್ವಾರ್ಥಿಯಾಗಿಬಿಡುತ್ತೀರಿ.

Q: ಇವರ ಸುತ್ತ ಒಂದು ನಿಗೂಢತೆ ಇರುತ್ತದೆ. ಪ್ರಾಮಾಣಿಕತೆಯಿದ್ದು, ಉತ್ತಮ ಗೆಳೆಯರಾಗಬಲ್ಲರು.

R: ನಿಮ್ಮ ಹೆಸರು ಆರ್‌ನಿಂದ ಆರಂಭವಾದರೆ ನೀವು ಪ್ರೀತಿ, ಜ್ಞಾನ, ಆರನೇ ಇಂದ್ರಿಯದ ಸಮಾಗಮ. ಪ್ರೀತಿಪಾತ್ರರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಬಲ್ಲಿರಿ. ನಿಮ್ಮ ಶಾಂತಿ ಪ್ರಿಯತೆ ಹಾಗೂ ಎಲ್ಲವನ್ನೂ ಸರಳವಾಗಿ ತೆಗೆದುಕೊಳ್ಳುವ ಗುಣದಿಂದಾಗಿ ನಿಮ್ಮನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚು. ಆದರೆ, ಬಹು ಬೇಗ ಕೋಪ ಬರುತ್ತದೆ. ಅಷ್ಟೇ ಬೇಗ ಹೋಗುತ್ತದೆ ಕೂಡಾ.

 S: ತುಂಬಾ ಪ್ರಾಮಾಣಿಕರಾದ ನೀವು ಉತ್ತಮ ನಾಯಕತ್ವ ಗುಣ ಹೊಂದಿರುತ್ತೀರಿ. ಸ್ವಲ್ಪವೇ ಕೊರತೆ ಇರುವುದು ರೊಮ್ಯಾಂಟಿಕ್ ಗುಣದಲ್ಲಿ. ಹೋದಲ್ಲೆಲ್ಲ ಆಕರ್ಷಣೆಯ ಕೇಂದ್ರಬಿಂದುವಾಗಬಲ್ಲಿರಿ. ನಿಮಗಿಷ್ಟವಾಗಿರುವವರ ಬಗ್ಗೆ ಅತಿಯಾದ ಪ್ರೀತಿ ತೋರಬಲ್ಲಿರಿ.

T: ಸಖತ್ತಾಗಿ ಚರ್ಚಿಸುವ ಕಲೆ ನಿಮ್ಮಲ್ಲಿದೆ. ಸಾಮಾನ್ಯವಾಗಿ ಗಲಾಟೆಯಾದಾಗ ಅಲ್ಲಿ ಮಧ್ಯವರ್ತಿಯಾಗಿ ಶಾಂತಿ ಸ್ಥಾಪಿಸಬಲ್ಲಿರಿ. ಅದೃಷ್ಟಕ್ಕಿಂತ ಹೆಚ್ಚು ಹಾರ್ಡ್ ವರ್ಕ್‌ ಮೇಲೆ ನಂಬಿಕೆ ಇರಿಸಿರುವವರು ನೀವು.

U: ಲಕ್ಷುರಿ ಲೈಫ್‌ಸ್ಟೈಲ್ ಪಡೆಯಬೇಕೆಂದು ಬಹಳ ಕಷ್ಟ ಪಡುತ್ತೀರಿ. ಯಾವಾಗ ಏನು ಮಾಡಬೇಕೆಂದು ನಿಮಗೆ ಚೆನ್ನಾಗಿ ಗೊತ್ತು. ಸದಾ ಹೊಸ ಐಡಿಯಾಗಳ ಮೇಲೆ ಕೆಲಸ ಮಾಡುತ್ತೀರಿ. ಹೀಗೆ ಮೇಲೇರುವ ಆಸೆಯ ಬೆನ್ನತ್ತಿ ಹತ್ತಿರದವರನ್ನು ಕಡೆಗಣಿಸುವಿರಿ.

V: ಪ್ರಾಮಾಣಿಕತೆ ಹಾಗೂ ಪ್ರೀತಿ ಎರಡೂ ನಿಮಗೊಲಿದಿವೆ. ಬಹಳ ಕಾಲದವರೆಗೂ ಹಲವಾರು ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ನಿಮ್ಮದು. ಸಂಬಂಧಗಳಲ್ಲಿ ನೀವು ಹೆಚ್ಚು ಪೊಸೆಸಿವ್ ಆಗಿಬಿಡಬಲ್ಲಿರಿ. ಖುಷಿಗಾಗಿ ಗಾಸಿಪ್‌ನಲ್ಲಿ ತೊಡಗುವಿರಿ. ಅವಲಂಬಿತರಾದರೂ ಕೆಲಸದ ವಿಷಯಕ್ಕೆ ಬಂದರೆ ಕಷ್ಟ ಪಟ್ಟು ಕೆಲಸ ಮಾಡುವಿರಿ.

W: ಇವರು ಸಾಮಾನ್ಯವಾಗಿ ಎಗ್ಗುಸಿಗ್ಗಿಲ್ಲದೆ ನುಗ್ಗುವವರು. ಸಂಬಂಧ ಎಂದರೆ ಹೆದರುವ ನೀವು ಯಾರಿಗಾದರೂ ಹತ್ತಿರಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಡೆಡ್‌ಲೈನ್ ಕೊಟ್ಟು ಕೆಲಸ ಮಾಡಿರೆಂದರೆ ಕಿರಿಕಿರಿಗೊಳಗಾಗುತ್ತೀರಿ.

X: ಈ ಅಕ್ಷರದ ಹೆಸರಿನವರು ಅಪರೂಪದಲ್ಲಿ ಅಪರೂಪವಾದರೂ, ಇವರನ್ನು ಬದ್ಧತೆ ಹೆಸರಿನಲ್ಲಿ ಕಟ್ಟಿಹಾಕಲಾಗುವುದಿಲ್ಲ. ಸ್ವಲ್ಪ ದುರಾಸೆ ಹಾಗೂ ಅಶಿಸ್ತಿನವರು.

Y: ಸ್ವತಂತ್ರಪ್ರಿಯರು ಹಾಗೂ ಇದಕ್ಕಾಗಿ ಏನು ಬೇಕಾದರೂ ಮಾಡಬಲ್ಲರು. ಬಹಳಷ್ಟು ವೈಗಳು ಉತ್ತಮವಾಗಿ ಸೆಟಲ್ ಆದವರನ್ನೇ ವಿವಾಹವಾಗುತ್ತಾರೆ. ಇನ್ನೊಬ್ಬರೊಂದಿಗೆ ಬೆರೆಯಲು ಸ್ವಲ್ಪ ಕಷ್ಟ ಪಡುತ್ತಾರೆ.

Z: ದೈಹಿಕ ಶಕ್ತಿ ಹಾಗೂ ಆತ್ಮಶಕ್ತಿ ಎರಡೂ ಹೆಚ್ಚು. ಗುರಿ ಬೆನ್ನತ್ತುವವರು. ಉತ್ತಮ ಬಾಸ್ ಹಾಗೂ ಮ್ಯಾನೇಜರ್ ಆಗಬಲ್ಲರು.



ಈ ಪೋಸ್ಟ್‌ ‌ನ್ನು‌ ನಿಮ್ಮ ಸ್ನೇಹಿತರಿಗೆ ಹಂಚಿ

Sunday, May 12, 2019

ಈಶ್ವರಿ‌ ವಿಶ್ವವಿದ್ಯಾ'ಲಯ'..

ನಿಮಗೆ ನೆನಪಿರಬಹುದು , ನಾನು ಇದೇ ಪೋಸ್ಟ್ ನ್ನು ಐದು ಸಾವಿರ ವರ್ಷಗಳ ಹಿಂದೆ ಇದೇ ತಾರೀಖಿನಂದು ಹಾಕಿದ್ದೆ. ನೀವು ಓದಿದ್ದಿರಿ. ಆಗಲೂ ನಿಮ್ಮ ಹತ್ತಿರ ಇದೇ ಮೊಬೈಲ್ ಇತ್ತು. ಇದೇ ಬಣ್ಣದ ಇದೇ ಬಟ್ಟೆ ಹಾಕಿದ್ದಿರಿ. ನಾನು ಈ ಪೋಸ್ಟ್ ಹಾಕುವ ಹಿಂದನ ದಿನ, ಇದೇ ರಮ್ಯಾ ಮತ್ತು ಭಗವಾನ್ ಇವೇ ಹೇಳಿಕೆ ನೀಡಿ ಮೊಟ್ಟೆಯೇಟು ತಿಂದಿದ್ದರು, ಐದು ಸಾವಿರ ವರ್ಷ ಗಳ ಹಿಂದೆ. ಮೋದಿ ಆಗಲೂ ಪ್ರಧಾನಿಯಾಗಿದ್ದರು.
ನನಗೆ ತಲೆ ಹಾಳಾಗಿರಬೇಕು, ಅಂತ ಯೋಚನೆ ಮಾಡಬೇಡಿ.  ಇಷ್ಷಕ್ಕೇ ಮುಗಿಯಲಿಲ್ಲ. ಅದರ ಹಿಂದನ ಐದು ಸಾವಿರ ವರ್ಷಗಳ ಹಿಂದೆಯೂ ಸೇಮ್ ಹೀಗೇ ಆಗಿತ್ತು. ಮತ್ತು ಅದರ ಹಿಂದಿನ ಐದು ಸಾವಿರ ವರ್ಷಗಳ ಹಿಂದೆಯೂ. .. ಹೀಗೆ ಪ್ರತೀ ಐದು ಸಾವಿರ ವರ್ಷಗಳಿಗೊಮ್ಮೆ ಇವೇ ಸೀನ್ ರಿಪೀಟ್ ಆಗಿವೆ. ನೂರಾರು ಅಲ್ಲ ಸಾವಿರಾರು ಬಾರಿ. ಈ ಜಗತ್ತು ಒಂದು ಸಿನಿಮಾದಂತೆ. ದೇವರು ನೋಡುವ ಸಿನಿಮಾ. ಆತ ಐದು ಸಾವಿರ ವರ್ಷಕ್ಕೊಮ್ಮೆ ಸೀಡಿ ಬದಲಾಯಿಸಿ , ಅದೇ ಸಿನಿಮಾ ಮತ್ತೆ ಮತ್ತೆ ನೋಡುತ್ತಾನೆ.


ಇದೆಲ್ಲ ನಾನು ಹೇಳಿದ್ದಲ್ಲ. ಇದನ್ನು ಹೇಳುತ್ತಿರುವುದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ.  ಮತ್ತು ಜಗತ್ತಿನಲ್ಲಿ ಇದನ್ನು ನಂಬುವ ಕನಿಷ್ಠ  ಹನ್ನೆರಡು ಲಕ್ಷ ಜನ ಇದ್ದಾರೆ.  2008 ರಲ್ಲೇ ಇವರ ಸಂಖ್ಯೆ 9 ಲಕ್ಷ ಇತ್ತು. 100 ದೇಶಗಳಲ್ಲಿ 8500 ಸಾವಿರ ಸೆಂಟರ್ ಗಳಿದ್ದವು.
ಸರಿ.  ಇಷ್ಟೇ ಆದರೆ ಏನು ತೊಂದರೆ ?  ಐದು ಸಾವಿರ ವರ್ಷಗಳಿಗೊಮ್ಮೆ ಜಗತ್ತು ಅದೇ ಅದೇ ರಿಪೀಟ್ ಮಾಡಿಕೊಳ್ಳುತ್ತದೆ ಅಂದುಕೊಳ್ಳೋಣ , ಮೂರ್ಖರು ಅಂತ ಸುಮ್ಮನಿರಬಹುದಿತ್ತಲ್ಲ.
ಇಲ್ಲ.  ಇಷ್ಟು ಸುಲಭವಿಲ್ಲ . ನನ್ನ ದೊಡ್ಡಪ್ಪ ತೀರಿಕೊಂಡಾಗ, ಡೊಡ್ಡಮ್ಮನನ್ಧು ನಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದವು. ಆಗ ಈ ಬ್ರಹ್ಮ ಕುಮಾರಿಗಳಿಗೆ ಎಲ್ಲಿಂದ ವಾಸನೆ ಬಂತೋ ಗೊತ್ತಿಲ್ಲ. ದೊಡ್ಡಮ್ಮ ನಿಗೆ ಈಶ್ವರೀ ಸೇರುವಂತೆ ಗಂಟು ಬಿದ್ದರು. ಆಗ ಇದೇನಂತ ನೋಡೋಣ ಅಂತ ನಾನು ಈಶ್ವರೀಗೆ ಒಂದು ವಾರ ಹೋದೆ. ಕರ್ಮ ಕರ್ಮ. ರಾಮ ಬೇರೆ , ರಾಜಾ ರಾಮ ಬೇರೆ ಅಂತೆಲ್ಲಾ ಏನೇನೋ ಕೊರೆದರು. ಹೇಗೆ ? ಅಂದೆ . ಗಾಂಧಿ ಬೇರೆ . ಮಹಾತ್ಮ ಗಾಂಧಿ ಬೇರೆ ಅಂದರು.  ಗೊತ್ತಾಗಲಿಲ್ಲ. ವಾಪಸ್ ಬಂದೆ. ಆಗ ನನ್ನ ಸಂಬಂಧಿಯೊಬ್ಬರು ಅದೇ ಕ್ಲಾಸ್ ನಲ್ಲಿದ್ದವರು , ನನ್ನನ್ನು ತಮ್ಮ ಮನೆಗೇ ಎಳೆದೊಯ್ದರು. ಆಕೆಯ ಒಬ್ಬಳೇ ಮಗಳು, ಇಂಜಿನಿಯರ್ ಅಮೇರಿಕಾದ ಹುಡುಗನೊಂದಿಗೆ ಮದುವೆ ಫಿಕ್ಸ್ ಆದವಳು , ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದು ಸತ್ತು ಹೋಗಿದ್ದಳು. ಈ ತಾಯಿ ಒಂದು ವಾರ ನೀರನ್ನೂ ಸೇವಿಸದೇ ಅತ್ತಿದ್ದರು. ಆಗ ಯಾರೋ ಅವರನ್ನು ಈಶ್ವರೀಗೆ ಸೇರಿಸಿದ ನಂತರವೇ ಅವರಿಗೆ ಸಮಾಧಾನ ಆಗಿದ್ದು. ಒಳ್ಳಯದೇ ಆಯಿತು ಅಂತೀರಾ ?  ಮುಂದೆ ಓದಿ. 
ಆಕೆಗೆ ಸಮಾಧಾನ ಆಗಲು ಕಾರಣವೇನೆಂದರೆ , ಇದೇ ಮಗ ನಿಮ್ಮ ಹೊಟ್ಟೆಯಲ್ಲಿ, ಐದು ಸಾವಿರ ವರ್ಷಗಳ ಹಿಂದೆಯೂ ಹುಟ್ಟಿದ್ದ , ಐದು ಸಾವಿರ ವರ್ಷಗಳ ನಂತರವೂ ಮತ್ತೆ ಹುಟ್ಟುತ್ತಾನೆ , ಅಂತ ಅವರು ನಂಬಿಸಿದ್ದು.
ಈ ತಾಯಿ ಈಗ ಈಶ್ವರೀಯ ಬಿಟ್ಟು ಬೇರೇನೂ ಮಾಡುವುದಿಲ್ಲ. ಈಶ್ವರೀಗೆ ಹಲವಾರು ಲಕ್ಷ ರೂಪಾಯಿ ದಾನ ಕೊಟ್ಟಿದ್ದಾರೆ. ಯಾರ ಬಳಿಯೂ ಮಾತನಾಡುವುದಿಲ್ಲ , ಯಾರ ಮನೆಗೂ ಹೋಗುವುದಿಲ್ಲ. ಸುಳ್ಳು ಕೂಡ ಹೇಳುವುದಿಲ್ಲ . ಅಂಥವರು ನನ್ನನ್ನು ದೇವರ ಮನೆಯಲ್ಲಿ ಕೂಡಿಸಿ ಧ್ಯಾನ ಮಾಡಲು ಹಚ್ಚಿದರು. ಸುಮಾರು ಅರ್ಧ ಗಂಟೆಯ ನಂತರ - ನೋಡು ಕಾಣುತ್ತಾ ? ಅಂತ ಕೇಳಿದರು. ನನಗೇನೂ ಕಾಣಲಿಲ್ಲ. ಏನು ? ಅಂದೆ . "ನೋಡು ಈ ಕೋಣೆಯ ತುಂಬಾ ಹತ್ತಿಯ ಉರುಳೆಗಳಂಥ , ಪ್ರಕಾಶಮಾನವಾದ ಮೋಡಗಳು ಬಂದಿವೆ , ಕಾಣುತ್ತಾ ? "
ಇಲ್ಲ. ನನಗೇನೂ ಕಾಣಲಿಲ್ಲ. ಆಕೆಯೇ ಹೇಳಿದರು -  ನನಗೂ ಮೊದ ಮೊದಲು ಕಾಣುತ್ತರಲಿಲ್ಲ. ನೀನು ಹದಿನೈದು ದಿನ ಬಾ, ಕಾಣುತ್ತದೆ, ಅಂತ. ನಾವು ಮೌಂಟ್ ಅಬುಗೆ ಹೋದಾಗ, ಅಲ್ಲಿ ದೊಡ್ಡ ಸಭಾಂಗಣ ಇದೆ. ಲಕ್ಷಾಂತರ ಜನ ಕೂಡುವಷ್ಟು. ಬಾಬಾ ಭಾಷಣ ಶುರು ಮಾಡಿದ ತಕ್ಷಣ, ಪ್ರಕಾಶ ಮಾನವಾದ ಹತ್ತಿಯಂಥ ಮೋಡಗಳು ಇಡೀ ಸಭಾಂಗಣ ತುಂಬುತ್ತವೆ. ಬಾಬಾ ಮುಖದಿಂದ ಬಂದ ತೇಜ ಕಣ್ಣು ಕುಕ್ಕುವಷ್ಟಿರುತ್ತದೆ , ಮಗಳೇ. ನಿನಗೆ ಸುಳ್ಳು ಹೇಳುವ ಯಾವುದೇ ಅಗತ್ಯ ನನಗಿಲ್ಲ " ಅಂದರು.  ಅದು ನಿಜವೂ ಆಗಿತ್ತು. ಮತ್ತೆ ಆಕೆ ಮಾನಸಿಕ ವಾಗಿ ಅತ್ಯಂತ ಸ್ವಸ್ಥೆ ಕೂಡಾ.
ಇವೆಲ್ಲ ಕೇಳಿ, ಹೌದಾ , ಈ ತರಹದ ಎಕ್ಸಪೀರಿಯನ್ಫ್ ಕೇವಲ ಒಂದೇ ಒಂದು ಸಲ ಸಿಕ್ಕರೂ ಜೀವನ ಧನ್ಯ ಅಂತ ಮತ್ತೆ ಈಶ್ವರೀಗೆ ಜಾಯಿನ್ ಆದೆ. ಅದು ಬಿಟ್ಟು ಇವರ ಮನೆಯಲ್ಲಿ ನಿತ್ಯ ಸಂಜೆ ಧ್ಯಾನ ಬೇರೆ. ಮೂರು ತಿಂಗಳಲ್ಲಿ ನಾನು ಕೇಳಿದ್ದು, ತಿಳಿದಿದ್ದು ಇಲ್ಲಿದೆ
ಈಶ್ವರೀಯ ಸ್ಥಾಪನೆ ಮಾಡಿದ್ದು ದಾದಾ ಲೇಖರಾಜ ಕ್ರಿಪಲಾನಿ. ಅಂತ ಒಬ್ಬ ಶ್ರೀಮಂತ ಸಿಂಧಿ ವಜ್ರದ ವ್ಯಾಪಾರಿ. 1936  ಹೈದರಾಬಾದ್ ನಲ್ಲಿ.  ಎರಡೇ ವರ್ಷ ಗಳಲ್ಲಿ ಇವರನ್ನು ಹಿಂದೂ ವಿರೋಧಿ ಅಂತ ಅವರ ಗುಂಪಿನವರೇ ಓಡಿಸಿದರು. ಇವರು ಹೋಗಿದ್ದು ಕರಾಚಿಗೆ. ಕೊನೆಗೆ ಮೌಂಟ್ ಅಬುಗೆ ಬಂದರು.  ದಾದಾ ಲೇಖರಾಜ ತನ್ನನ್ನು ತಾನೇ ಪ್ರಜಾಪಿತ ಬ್ರಹ್ಮ ಅಂತ ಕರೆದುಕೊಂಡರು. 1969 ರಲ್ಲಿ ವೀರೇಂದ್ರ ದೀಕ್ಷಿತ ಅನ್ನುವ ಇನ್ನೊಬ್ಬ ಇವರ ಆಶ್ರಮ ಸೇರಿದ. ಇವರ ಮುರಳಿ ಅಂತ ಡೇಲಿ ಬುಲೆಟಿನ್ ಸ್ಟಡಿ ಮಾಡಿ ತನ್ನನ್ಧು ತಾನೇ ಶಿವಾ ಬಾಬಾ ಅಥವಾ ಈಶ್ವರ ಅಂತ ಕರೆದುಕೊಂಡ.
ಇವರ ಸಿದ್ಧಾಂತ ಗಳು ನೇರವಾಗಿ ಹುಚ್ಚಾಸ್ಪತ್ರೆಯಿಂದ ಬಂದ ತರ ಇವೆ.
ಪ್ರತೀ ಐದು ಸಾವಿರ ವರ್ಷಗಳಿಗೊಮ್ಮೆ ಪ್ರಳಯ ಆಗುತ್ತದೆ.
ಈಗ ಐದು ಸಾವಿರ ವರ್ಷ ಮುಗಿದಿದೆ , ಆದುದರಿಂದ ಈಗ ಪ್ರಳಯ ನಿಶ್ಚಿತ.
ಪ್ರಳಯ ಮುಗಿದಾಗ, ಬ್ರಹ್ಮ ಕುಮಾರಿಯರಾದ ಹದಿನಾರು ಲಕ್ಷ ಜನ ಮತ್ತು ಅವರಿಗೆ ಸೇವಕರು ಅಂತ 32 ಲಕ್ಷ ಜನ ಮಾತ್ರ ಬದುಕಿರುತ್ತಾರೆ.
ಆಗ ಸತ್ಯಯುಗ. ಯಾವುದೇ ರೋಗ ರುಜಿನ , ಇರುವುದಿಲ್ಲ . ಸೆಕ್ಸ್ ಇರುವುದಿಲ್ಲ. ಒಂದು ಸಾವಿರ ವರ್ಷ ಸಾವು ಇರುವುದಿಲ್ಲ. ಈಶ್ವರೀಗೆ ಸೇರಿದವರೆಲ್ಲ ದೇವತೆಗಳಾಗುತ್ತಾರೆ. ಅವರಿಗೆ ಈಗಾಗಲೇ ತಲೆಯ ಮೇಲೆ ಕಿರೀಟ ಬೆಳೆಯಲು ಆರಂಭವಾಗಿದೆ. ಅವರು ಗಾಳಿಯಲ್ಲಿ ಹಾರಬಲ್ಲರು. ಈಗಿನ ಯಾವುದೇ ಸಾಧನ ಅಂದರೆ ಕಾಗದ ಪೆನ್ನು ಕಂಪ್ಯೂಟರ್ , ಸಿಮೆಂಟ್, ಕಾರ್ ಅಲ್ಲಿ ಇರುವುದಿಲ್ಲ. ಮನೆ ಗಳು ಬಂಗಾರದ್ದಾಗಿರುತ್ತವೆ. ಅಂದರೆ ಇದೇ ಭೂಮಿಯೇ ಸ್ವರ್ಗವಾಗಿರುತ್ತದೆ.
ಆಗ ಶ್ರೀ ಕೃಷ್ಣ ಬಂದು ಭಗವದ್ಖೀತೆ ಹೇಳುತ್ತಾನೆ. ಕೃಷ್ಣ ಭಗವದ್ಗೀತೆ ಮಹಾಭಾರತ ಕಾಲದಲ್ಲಿ ಹೇಳಿದ್ದು ಅಲ್ಲ.  ಯಾಕೆಂದರೆ ಗೀತೆ ಹೇಳಿದ ನಂತರ ಧರ್ಮ ಸಂಸ್ಥಾಪನೆ ಆಗಿಲ್ಲ . ಹಾಗಾಗಿ ಅದು ಸುಳ್ಳು. ಈಗ ಗೀತೆ ಹೇಳಿದ ನಂತರ ಒಂದು ಸಾವಿರ  ವರ್ಷ ಧರ್ಮ ಇರುತ್ತದೆ. ಹಾಗಾಗಿ ನಾವು ಹೇಳುವುದು ಸರಿ. ಇತ್ಯಾದಿ.
ಈತರದ ಗ್ರೂಪ್ ಗಳಿಗೆ ಕಲ್ಟ್ ಅಂತ ಕರೆಯುತ್ತಾರೆ. ಪ್ರಳಯ ಆಗುತ್ತದೆ ಅಂತ ಒಂದು ಕಲ್ಟಗೆ ಸೇರಿದ ನೂರು ಜನ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಂಡ ದಾಖಲೆಯೂ ಇದೆ.
ಇದೇ ಈಶ್ವರೀ 1976 ರಲ್ಲಿ ಪ್ರಳಯ ಆಗುತ್ತದೆ ಅಂತ ಹೆದರಿಸಿತ್ತು. ನಂತರ ಪ್ರತೀ ಸಲ ಪ್ರಳಯ ಮುಂದೆ ಹಾಕಿದರು. ಪ್ರಳಯ ಆಗುತ್ತದೆ ಅಂತ ಹೆದರಿಸಿ ಜನರ ಬಳಿ ದುಡ್ಡು ಕೀಳುವುದು. ತಮ್ಮ ಸಂಘಟನೆ ತೊರೆದು ಹೋದರೆ ದೇವರು ಶಿಕ್ಷೆ ಕೊಡುತ್ತಾನೆ , ಐದನೇ ಮಹಡಿಯಿಂದ ದೂಡುತ್ತಾನೆ ಅಂತ ಚಿತ್ರ ಬರೆದು ತೋರಿಸುವುದು. ತಮ್ಮ ಸಂಘಟನೆಯಲ್ಲೇ ಇದ್ದರೆ ದೈವತ್ವ ಬರುತ್ತದೆ ಅಂತ ಆಮಿಷ. ಈಶ್ವರೀಗೆ ಸೇರಿದ ಎಲ್ಲರೂ ದೇವದೂತರು , ಅವರಿಗೆ ದೇವರ ಜೊತೆಯಲ್ಲಿ ಸಂಭಾಷಣೆ ಮಾಡಲು ಸಾಧ್ಯ ಅಂತ ಹೇಳುವುದು
ಜಗಮೋಹನ್ ಗಾರ್ಗ್ ಎಂಬಾತ , ಈಶ್ವರೀಯ ವಿಶ್ವ ವಿದ್ಯಾಲಯದ " ಪೀಸ್ ಆಫ್ ಮೈಂಡ್ " ಎನ್ನುವ ಟೀವಿ ಚ್ಯಾನಲ್ಲಿನ ಮಾಲೀಕ. ಈ ಸಂಘಟನೆಯ ಪ್ರಮುಖ ಸ್ಟ್ರಾಟಜಿಸ್ಟ್ ಕೂಡ . ಈತ 5600 ಕೋಟಿ ರೂಪಾಯಿಗಳ ಫ್ರಾಡ್ ಮಾಡಿ ಲಕ್ಷಾಂತರ ಜನರನ್ನು ವಂಚಿಸಿದ್ದಾನೆ.
ಗಂಡನನ್ನೇ ಅಣ್ಣ ಅಂತ ಕರೆಯಬೇಕು. ಗಂಡು ಹೆಣ್ಣು ಕೂಡಬಾರದು. ತಾವೇ ಸ್ವತಃ ಅಡಿಗೆ ಮಾಡಿ ಉಣ್ಣಬೇಕು ಅಥವಾ ಬೇರೆ ಬ್ರಹ್ಮ ಕುಮಾರಿಯ ಮನೆಯಲ್ಲಿ ಮಾತ್ರ ಉಣ್ಣಬೇಕು , ಇತ್ಯಾದಿ ಹುಚ್ಚಾಪಟ್ಟೆ ರೂಲ್ಸ್ ಇರುವ ಈ ಸಂಸ್ಥೆಗೆ ಲಕ್ಷಾಂತರ ಮೆಂಬರ್ಸ್ ಇರುವುದು , ಜಗತ್ತಿನಲ್ಲಿ ದೇವರ ಹೆಸರಿನಿಂದ ಏನು ಬೇಕಾದರೂ ಮಾಡಬಹುದು ಅಂತ ತೋರಿಸುತ್ತದೆ.
ಇವರು ಕೆಲವು ಒಳ್ಳೆಯ ಕೆಲಸಗಳನ್ಧೂ ಮಾಡಿದ್ದಾರೆ. ಇಡೀ ಮೌಂಟ್ ಅಬು ಸೋಲಾರ್ ಎನರ್ಜಿಯಿಂದ ನಡೆಯುತ್ತದೆ. ವಿಶ್ವದ ಅತ್ಯಂತ ದೊಡ್ಡ ಸೋಲಾರ ಕುಕ್ಕರ್ ತಯಾರಿದ್ದಾರೆ. ಮೆಡಿಕಲ್ ರೀಸರ್ಚ್ ಸೆಂಟರ್ ಸ್ಥಾಪಿಸಿದ್ದಾರೆ. ರೈತರಿಗೆ ಸ್ವಸಹಾಯ ಪದ್ಧತಿ ಕಲಿಸಿದ್ದಾರೆ. ಆದರೆ ಯಾವುದೇ ಇಂತಹ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುವುದು ಅವಗಳಿಗೆ ಬಂಡವಾಳ ಹರಿದು ಬರಲು ದಾರಿ. ಮೊದಲೇ ಹೇಳಿದಂತೆ , ಬಂದ ಹಣದ ಶೇಕಡ 10 ರಿಂದ ಕೆಲಸ ಮಾಡುವುದು. ಉಳಿದ ಹಣ ಕಿಸೆಯಲ್ಲಿ.
ಇದಕ್ಕಿಂತ ಮಜಾ ಅಂದರೆ , ಪ್ರಳಯ ಈಗ ಆಗುತ್ತದೆ . ಆಗ ಆಗುತ್ತದೆ ಅಂತ ಹೇಳುವ ಇವರಿಗೇಕೆ ಮೆಡಿಕಲ್ ರೀಸರ್ಚ್ , ಯಾಕೆ ಸೋಲಾರ್ ಎನರ್ಜಿ ?
ಈ ತರ ಕಲ್ಟಗಳು ಸಮಾಜಕ್ಕೆ ಮಾರಕ. ಹಿಂದೂ  ಧರ್ಮದ  ಹೆಸರಿನಲ್ಲಿ  ಇಂಥವು ಬೇಡವೇ  ಬೇಡ.
(* ಲೇಖನದ ಬಗ್ಗೆ ಯಾವುದೇ ದೂರುಗಳಿದ್ದರೆ ಕೆಳಗೆ ಕಾಮೆಂಟ್ ಮಾಡಿ. ನಿಮ್ಮ ದೂರು ನಿಜವೆನಿಸಿದರೆ ಲೇಖನವನ್ನು ಇಲ್ಲಿಂದ ತೆಗೆದುಹಾಕಲಾಗುತ್ತದೆ.)

ನಿಂತ ಹೆಣಗಳು

ಜನರ ಗುಂಪಿನ ನಡುವೆ ಸೆಣಸುತ್ತಾ ಕ್ಯಾಮೆರಾವನ್ನು ಮೇಲೆ ಹಿಡಿದು ಆ ದೃಶ್ಯವನ್ನು ಸೆರೆಹಿಡಿಯುತ್ತಿದ್ದೆ.

ಯಾರೋ ಒಬ್ಬ ಹಿಂದಿನಿಂದ ಭುಜದ ಮೇಲೆ ಕೈಹಾಕಿ ನನ್ನ ಏಕಾಗ್ರತೆಗೆ ಭಂಗ ತಂದ.
ಸಿಟ್ಟಿನಿಂದ ಹಿಂದೆ ತಿರುಗಿದೆ.ನನ್ನ ಉಗ್ರ ಕಣ್ಣುಗಳನ್ನು ಎರಡು ಪ್ರಶಾಂತ ಕಣ್ಣುಗಳು ಸಂಧಿಸಿದುವು.

"ಏನಿದು ಗುಂಪು? " ಅಂದ.
ಕಣ್ಣು ಕಾಣ್ಸಲ್ವೇನಯ್ಯಾ ಅನ್ನುವಷ್ಟು ಸಿಟ್ಟು ಬಂತು. ತಡೆದುಕೊಂಡೆ.
'ಸ್ಪಾಟ್ ಡೆತ್ತು. ಹೆಣ ಬಿದ್ದಿದೆ."
ಆತ ಕತ್ತನ್ನು ಮುಂದೆ ಚಾಚಿ ಅವಲೋಕಿಸಿದ.

ನೀರು ಕಾಣದೇ ಜಿಡ್ಡುಗಟ್ಟಿದ ಗಡ್ಡ ಕೊರಳನ್ನು ಮುಚ್ಚಿತ್ತು. ಕೋಟು ಎನಿಸಿಕೊಳ್ಳಲೂ ಲಾಯಕ್ಕಿಲ್ಲದ ಮಾಸಲು ಬಟ್ಟೆಯ ಮೇಲೆ ಎಣಿಸಿದಷ್ಟು ಪ್ಯಾಚುಗಳು.
"ಇಷ್ಟೊತ್ತಿನವರೆಗೂ ಗುಟುಕು ಜೀವ ಇತ್ತು,ಇದೀಗ ಕೈಕಾಲುಗಳು ನಿಂತುಹೋದವು " ಅಂದೆ.
ಆತ ಕೆಳಗೆ ನೆಟ್ಟಿದ್ದ ದೃಷ್ಟಿಯನ್ನು ಕಿತ್ತು  ಎದುರು ದಿಕ್ಕಿಗೆ ತಿರುಗಿ ಒಂದೆರಡು ಕ್ಷಣ ಕಣ್ಣುಮುಚ್ಚಿ ತೆರೆದು ಹೇಳಿದ - "ಹೆಣ ಬಿದ್ದಿಲ್ಲ,ನಿಂತಿದೆ "

ಇದ್ಯಾವುದೋ ವಿಲಕ್ಷಣ ಗಿರಾಕಿಯ  ಕೈಗೆ ಸಿಕ್ಕಿಬಿದ್ದೆನಲ್ಲ ಅನ್ನಿಸ್ತು..

ನನ್ನ ಪ್ರಶ್ನಾರ್ಥಕ ಕಣ್ಣುಗಳನ್ನು ನೋಡಿ ಆತ ಪ್ರಶಾಂತ ಚಿತ್ತದಿಂದ ಹೇಳಿದ. -" ಹೌದು. ಹೆಣ ಬಿದ್ದಿಲ್ಲ, ನಿಂತಿದೆ ..ಮನುಷ್ಯತ್ವದ ಹೆಣ ನಿಂತಿದೆ..ನಿಮ್ಮೆಲ್ಲರ ಕಾಲುಗಳ ಮೇಲೆ "

ನನಗೆ ಕಾದ ಚೂರಿ ಕರುಳು ಹೊಕ್ಕಂತಾಯಿತು.
ದೂರದಲ್ಲಿ ಆಂಬುಲೆನ್ಸ್ ಬರುವ ಸದ್ದು ಕೇಳಿಸುತ್ತಿದ್ದಂತೆ ಹೆಣಗಳೆಲ್ಲ ಚದುರಿದೆವು.

Friday, May 3, 2019

'ಎವರೆಸ್ಟ್ ಪರ್ವತವನ್ನು ಹತ್ತುತ್ತೀಯಾ ಮಗೂ'?

ಮೇ 29, 1953....
ಬಹಳ ಮಹತ್ತರ ದಿನ.
ಏಕೆ ಗೊತ್ತಾ?
ಅಂದು ಎವರೆಸ್ಟ್ ಪರ್ವತವನ್ನು ತೇನ್ ಸಿಂಗ್ ಮತ್ತು ಹಿಲರಿ ಹತ್ತಿದ್ದರು. ಆಗ ತೇನ್ ಸಿಂಗ್ ಗೆ ಸುಮಾರು ನಲವತ್ತು ವರ್ಷ ವಯಸ್ಸು. ಅವರನ್ನು ಸ್ವಾಗತಿಸಲು, ಅಭಿನಂದಿಸಲು ಬಂದಿದ್ದ ಒಬ್ಬ ಪತ್ರಿಕಾ ವರದಿಗಾರರು ತೇನ್‌ಸಿಂಗ್ ಸಿಂಗ್ ನನ್ನು ಪ್ರಶ್ನಿಸಿದರು, 'ನಲವತ್ತರ ವಯಸ್ಸಿನಲ್ಲಿ ಇಂತಹ ಮಹತ್ ಸಾಧನೆಯನ್ನು ಮಾಡಿ ನಿಂತಿರುವ ನಿಮಗೆ ಹೇಗನಿಸುತ್ತದೆ'? ಮತ್ತು 'ಪ್ರೇರಣೆ ಏನು'? ಎಂದು.
ತೇನ್ ಸಿಂಗರು 'ನಾನು ಎವರೆಸ್ಟ್ ಪರ್ವತವನ್ನು ಇಂದು ಹತ್ತಿದೆ ಎಂದು ಯಾರು ಹೇಳಿದರು? ನಾನು ಹತ್ತಿದ್ದು ನನ್ನ ಹತ್ತನೆಯ ವಯಸ್ಸಿನಲ್ಲಿ' ಎಂದರು. ಆಶ್ಚರ್ಯಗೊಂಡ ಪತ್ರಿಕೆಯವರ ಮುಖ ನೋಡಿ ತೇನ್ ಸಿಂಗ್ ರೇ ಮುಂದುವರೆಸಿದರು.


'ನನ್ನದು ಶೆರ್ಪ ಜನಾಂಗಕ್ಕೆ ಸೇರಿದ ಬಡ ಕುಟುಂಬ. ನಮ್ಮ ಜೀವನಕ್ಕೆ ಆಧಾರ ಇಪ್ಪತ್ತೈದು ಮೇಕೆಗಳು. ಅವುಗಳನ್ನು ಮೇಯಿಸಿಕೊಂಡು ಬರಲು ನಮ್ಮ ತಾಯಿ ಪ್ರತಿದಿನ ನನ್ನನ್ನು ಪರ್ವತದ ತಪ್ಪಲಿಗೆ ತಂದು ಬಿಡುತ್ತಿದ್ದರು. ಊಟದ ಬುತ್ತಿ, ಕುಡಿಕೆಯಲ್ಲಿ ನೀರು ಕೊಟ್ಟು 'ಇಪ್ಪತ್ತೈದು ಮೇಕೆಗಳನ್ನು ಜಾಗರೂಕತೆಯಿಂದ ಮೇಯಿಸಿಕೊಂಡು ಬಾ' ಎನ್ನುತ್ತಿದ್ದರು. ಹೊರಡುವ ಮುಂಚೆ ಪರ್ವತ ಶ್ರೇಣಿಗಳತ್ತ ಕೈ ತೋರಿಸಿ 'ಮಗು! ಅಲ್ಲಿ ಕಾಣುತ್ತಿರುವ ಎವರೆಸ್ಟ್ ಪರ್ವತವನ್ನು ಇದುವರೆಗೆ ಯಾರೂ ಹತ್ತಿಲ್ಲ! ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿ ಕೆನ್ನೆ ಸವರಿ ಹೋಗುತ್ತಿದ್ದರು. ಇಡೀ ದಿನ ಮೇಕೆಗಳನ್ನು ಮೇಯಿಸುತ್ತಾ ಒಮ್ಮೆ ಮೇಕೆಗಳತ್ತ ಮತ್ತೊಮ್ಮೆ ಎವರೆಸ್ಟ್ ಪರ್ವತದತ್ತ ನೋಡುತ್ತಾ, ಆ ಪರ್ವತವನ್ನು ಹತ್ತುವ ಹಗಲುಗನಸು ಕಾಣುತ್ತಾ ಸುತ್ತುತ್ತಿದ್ದೆ. ಅಂದು ಮಾನಸಿಕವಾಗಿ ಹತ್ತಲು ಪ್ರಾರಂಭಿಸಿದೆ. ಇಂದು ದೈಹಿಕವಾಗಿಯೂ ಹತ್ತಿದ್ದೇನೆ.


ಈ ಸಾಹಸಕ್ಕೆ ತಾಯಿಯ 'ಯಾರೂ ಎವರೆಸ್ಟ್ ಪರ್ವತವನ್ನು ಹತ್ತಿಲ್ಲ, ನೀನು ಹತ್ತುತ್ತೀಯಾ ಮಗೂ?' ಎಂದು ಕೇಳಿದ ಮಾತೇ ಸ್ಪೂರ್ತಿ. ಅಬ್ಬಬ್ಬಾ! ಎಂತಹ ತಾಯಿ, ಎಂತಹ ಮಗ! ಮರವನ್ನು ಹತ್ತಬೇಡಾ, ಬಿದ್ದರೆ ಪೆಟ್ಟಾದೀತು ಎಂದು ಹೇಳುವ ವಿದ್ಯಾವಂತರಾದ ತಂದೆ-ತಾಯಿಯರು ನಾವೆಲ್ಲಿ? ಎವರೆಸ್ಟ್ ಪರ್ವತವನ್ನೇ ಹತ್ತು ಎಂದು ಹೇಳಿದ ಆ ಅವಿದ್ಯಾವಂತೆ ತಾಯಿ ಎಲ್ಲಿ? 'ನೀನು ದೊಡ್ಡ ಸಾಫ್ಟ್ ವೇರ್ ಎಂಜಿನಿಯರ್ ಆಗಬೇಕು. ದೊಡ್ಡ ಸಂಬಳ ಪಡೆಯಬೇಕು, ದೊಡ್ಡ ಮನೆ ಕಟ್ಟಿಸಬೇಕು, ದೊಡ್ಡ ಕಾರ್ ತೆಗೆದುಕೊಳ್ಳಬೇಕು, ಶ್ರೀಮಂತ ಹೆಂಡತಿಯನ್ನು ಮದುವೆಯಾಗಬೇಕು, ದೊಡ್ಡ ಬ್ಯಾಂಕ್ ಬ್ಯಾಲೆನ್ಸ್ ಇಡಬೇಕು' ಇದು ನಮ್ಮ ಬೋಧನೆ. ಎವರೆಸ್ಟ್ ಹತ್ತು ಎಂದು ಯಾವ ಹೆತ್ತವರೂ ಹೇಳುವುದಿಲ್ಲ. ಆ ಮಕ್ಕಳೂ ಏರುವುದಿಲ್ಲ. ಆ ಮಕ್ಕಳ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರುವುದೂ ಇಲ್ಲ! ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡೋಣ, ಒಳ್ಳೆಯ ಆಸ್ತಿ-ಪಾಸ್ತಿ ಕೂಡಿಡೋಣ. ಸಾಧ್ಯವಾದರೆ ಒಂದು ಮಹತ್ತರ ಸಾಧನೆಯನ್ನು ಮಾಡಲು ಸಲಹೆ ಕೊಡೋಣ. ಪ್ರೋತ್ಸಾಹಿಸೋಣ. (ಸಂಗ್ರಹ)

Thursday, April 25, 2019

ನಕಾರಾತ್ಮಕ ವ್ಯಕ್ತಿಗಳು

ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡು ವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ ಅಂದ್ರೆ, ಅದಕ್ಕೆ ಬಣ್ಣ ಹಾಕಿದ್ದು ಹೆಚ್ಚಾಯಿತು ಅಂತಾರೆ. ಇಂಥವರು ಐಶ್ವರ್ಯ ರೈ ಅನ್ನು ನೋಡಿ, ಅವಳ ಮೂಗು ತುಸು ನೀಳವಾಗಿದಿದ್ದರೆ ಚೆನ್ನಾಗಿರುತ್ತಿದ್ದಳು ಎಂದು ಹೇಳಲು ಹಿಂದೇಟು ಹಾಕಲಾರರು.

ಇವರಿಗೆ ಯಾವುದರಲ್ಲೂ ಸಮಾಧಾನವಿಲ್ಲ. ಪ್ರತಿಯೊಂದರಲ್ಲೂ ದೋಷ ಹುಡುಕುತ್ತಾರೆ. ಕೊರಗು ಅವರ ಗುಣ. ಟೀಕೆ ಅಸ್ತ್ರ. ಅಪಸ್ವರವೇ ದನಿ. ನಕಾರಾತ್ಮಕತೆ ವ್ಯಕ್ತಿತ್ವ. ಇಂಥವರು ತಮಗೆ ಅಂಟಿದ ವ್ಯಾಧಿಯನ್ನು ಬೇರೆಯವರಿಗೂ ಅಂಟಿಸುತ್ತಾರೆ. ಎಂಥ ಸುಂದರ, ಹಿತಕರ ಪರಿಸರವನ್ನು ಬೇಕಾದರೂ ತಮ್ಮ ಒಂದು ಮಾತಿನಿಂದ ಹಾಳುಗೆಡವುತ್ತಾರೆ.

ಇಂಥವರು ಎಲ್ಲ ಆಫೀಸು, ಸಂಘಟನೆ, ಊರುಗಳಲ್ಲೂ  ಇರುತ್ತಾರೆ ಹಾಗೂ ತಮ್ಮ ಇರುವಿಕೆಯನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾರೆ. ಇಂಥವರು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಎಲ್ಲವನ್ನು ಸಂದೇಹದಿಂದಲೇ ಗಮನಿಸುತ್ತಾರೆ. ಪ್ರತಿಯೊಂದರಲ್ಲೂ ಓರೆಕೋರೆಗಳನ್ನು ಹುಡುಕುತ್ತಾರೆ. ಹಾಗೆಂದು ಅಂಥ ಅವ್ಯವಸ್ಥೆ ಅಥವಾ ಓರೆಕೋರೆಗಳನ್ನು ತಾವೇ ಮುಂದಾಗಿ ಸರಿಪಡಿಸಲಾರರು. ಪರಿಹಾರ ಹುಡುಕಲಾರರು. ಅವರದ್ದೇನಿದ್ದರೂ ತಪ್ಪುಗಳನ್ನಷ್ಟೇ ಹುಡುಕುವುದು. ಉಳಿದ ಯಾವ ಕೆಲಸವೂ ಅವರಿಗೆ ಸಂಬಂಧವಿಲ್ಲ.

ಇಂಥವರು ತಾವಾಗಿ ಯಾವ ಕೆಲಸವನ್ನೂ ಮಾಡಲಾರರು. ಇತರರು ಮಾಡಿದ್ದನ್ನು ಟೀಕಿಸಬಲ್ಲರು. ಒಂದು ವ್ಯವಸ್ಥೆಯನ್ನು ಹೇಗೆ ಸರಿಪಡಿಸಬಹುದು ಎಂದು ಕೇಳಿದರೆ ಇವರಲ್ಲಿ ಉತ್ತರವಿರುವುದಿಲ್ಲ. ಆ ವ್ಯವಸ್ಥೆಯಲ್ಲಿ ಇರುವ ದೋಷಗಳೇನು ಎಂಬುದರ ಉದ್ದ ಪಟ್ಟಿ ಇವರಿಗೆ ಬಾಯಿ ಪಾಠದಷ್ಟು ಸುಲಲಿತ.

ಇದು ಕೇವಲ ಸ್ವಭಾವ ಅಲ್ಲ. ಇದೊಂದು ಮಾನಸಿಕ ರೋಗ. ಇಂಥವರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇಂಥ ಗುಣ ಹೊಂದಿರುವವರು ಎಲ್ಲರ ತಿರಸ್ಕಾರಕ್ಕೆ ಪಾತ್ರರಾಗುತ್ತಾರೆ. ಎಲ್ಲರೂ ಇವರನ್ನು ದೂರವಿಡಲು ಪ್ರಯತ್ನಿಸುತ್ತಾರೆ. ಅದೆಷ್ಟೇ ಉತ್ತಮ ಆಫೀಸು, ಪರಿಸರವೇ ಇರಬಹುದು, ಅಲ್ಲಿ ಸಣ್ಣ ಪುಟ್ಟ ನ್ಯೂನತೆಗಳಿರುವುದು ಸಹಜ. ಅಂಥ ಹೊಳೆವ ಸೂರ್ಯನೂ ಗ್ರಹಣ ಕಾಲದಲ್ಲಿ ಮಂಕಾಗುತ್ತಾನೆ. ನ್ಯೂನತೆಗಳೇ ಪ್ರಮುಖ ವಾಗಬೇಕಿಲ್ಲ. ಅವನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಹಾಗೂ ಸರಿಪಡಿಸುವ ಕಳಕಳಿ ನಮ್ಮದಾಗಬೇಕು. ಅಪಸ್ವರವನ್ನು ಎತ್ತಲೇಬೇಕಾದ ಪ್ರಸಂಗ ಅನಿವಾರ್ಯವಾದರೆ ನೀವು ಕೊನೆಯ ವರಾಗಿ ಹಾಗೂ ಅದು ಸರಿಪಡಿಸುವುದರಲ್ಲಿ ಮೊದಲನೆ ಯವರಾಗಿ.

ನ್ಯಾನೋ ಕಥೆ

"ನನ್ನ ಆಹ್ವಾನವನ್ನು ಮನ್ನಿಸಿ ಬಂದಿದ್ದಕ್ಕೆ ಧನ್ಯವಾದ. ನಾಳೆ ನನ್ನನ್ನು ನೇಣಿಗೇರಿಸುತ್ತಾರೆ. ಸಾಯುವ ಮುನ್ನ ನಿಮ್ಮ ಬಳಿ ಹೇಳುವ ವಿಷಯವೊಂದಿತ್ತು."
"ಕೇಳುತ್ತಿದ್ದೇನೆ" ಎಂಬಂತೆ ಅವನು ತಲೆಯಾಡಿಸಿದ.
"ನಿಮ್ಮ ಹೆಂಡತಿಯನ್ನು ನಾನು ಕೊಲೆ ಮಾಡಲಿಲ್ಲ. ಸಾಯಲಿರುವ ಮನುಷ್ಯ ಸುಳ್ಳಾಡಬೇಕಿಲ್ಲ. ಆದರೆ ನಿಮ್ಮ ದ್ವೇಷದ ಹೊರೆ ಹೊತ್ತು ಸಾಯುವುದು ನನಗೆ ಬೇಕಿಲ್ಲ. ಅದಕ್ಕೆ ನಿಮ್ಮನ್ನು ಕರೆಸಿದೆ. ನಿಜವಾಗಿಯೂ ನಾನು ನಿಮ್ಮ ಪತ್ನಿಯನ್ನು ಕೊಂದಿಲ್ಲ. ನನ್ನನ್ನು ನಂಬಿ."
ಕ್ರೌರ್ಯ ಮಡುಗಟ್ಟಿದ ಮುಖಭಾವದೊಡನೆ ಅವನೆಂದ, "ಅದು ನಿನಗಷ್ಟೇ ಅಲ್ಲ, ನನಗೂ ಗೊತ್ತು."
ಮಂದಸ್ಮಿತನಾಗಿ, ಬೆರಳಲ್ಲಿ ಕಾರಿನ ಕೀಲಿ ತಿರುವುತ್ತಾ ಗೋಡೆಯಾಚೆ ಕಾದಿದ್ದ ತನ್ನ ಪ್ರೇಯಸಿಯತ್ತ ಬಿರಬಿರನೆ ನಡೆದ.

ಒಂದು ಅತ್ಯಮೂಲ್ಯವಾದ ಪಾಠ

ಒಂದ್ ಪಾತ್ರೆಲಿ ನೀರು ಹಾಕಿ ಅದರಲ್ಲಿ ಒಂದು ಕಪ್ಪೆ ಬಿಟ್ಟು ಒಲೆ ಹಚ್ಚಿ ಬಿಸಿ ಮಾಡಿದರೆ ಏನಾಗುತ್ತೆ ಗೊತ್ತಾ? ಕಪ್ಪೆ ಬಿಸಿ ಆಗ್ತಿರೋ ನೀರಿಗೆ ಒಗ್ಗಿಕೊಳ್ತಾ ಬರುತ್ತೆ. ಆದರೆ ನೀರು ಇನ್ನೇನು ಕುದಿಯುವಷ್ಟು ಬಿಸಿ ಆದಾಗ ಅದಕ್ಕೆ ಇನ್ನು ತಡಿಯಕ್ಕಾಗಲ್ಲ. ಆಗ ಹೊರಗೆ ಹಾರಿ ಹೋಗಕ್ಕೆ ಪ್ರಯತ್ನ ಮಾಡುತ್ತೆ...ಆದ್ರೆ ಆಗ ಅದಕ್ಕೆ ಹಾರಕ್ಕಾಗಲ್ಲ... ಯಾಕಂದ್ರೆ ಅದರ ಶಕ್ತಿಯೆಲ್ಲ ಹೊರಟು ಹೋಗಿರುತ್ತೆ. ಆದ್ದರಿಂದ ಕಪ್ಪೆ ಸತ್ತುಹೋಗುತ್ತೆ.
ಈಗ ಪ್ರಶ್ನೆ - ಕಪ್ಪೆ ಯಾಕೆ ಸಾಯುತ್ತೆ? ಯೋಚನೆ ಮಾಡಿ!
ನಿಮ್ಮಲ್ಲೆ ಎಷ್ಟೋ ಜನ ಕುದಿಯೋ ನೀರೇ ಕಾರಣ ಅಂತ ಹೇಳ್ತೀರಿ ಅಂತ ಗೊತ್ತು, ಆದ್ರೆ ನಿಜವಾದ ಕಾರಣ ಅದಲ್ಲ. ಕಪ್ಪೆಗೆ ಯಾವಾಗ ಹೊರಗೆ ಹಾರಿ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡದೆ ಇರೋದೇ ಅದರ ಸಾವಿಗೆ ಕಾರಣ.
ನಾವೂ ಅಷ್ಟೆ... ಸುಮಾರ್ ಸಲಿ ಜನರು ಏನ್ ಮಾಡ್ತಾ ಇದ್ದರೂ ನಾವು ಅಡ್ಜಸ್ಟ್ ಮಾಡ್ಕೊಂಡ್ ಹೋಗ್ತಾ ಇರ್ತೀವಿ. ಆದರೆ ಯಾವಾಗ ಈ ಅಡ್ಜಸ್ಟ್ ಅನ್ನೋದನ್ನ ನಿಲ್ಲಿಸಿ ‘ಹೊರಗೆ’ ಹೋಗಬೇಕು ಅನ್ನೋ ತೀರ್ಮಾನ ಸರಿಯಾಗಿ ಮಾಡಲ್ಲ.
ಜನರು ನಮ್ನ ದೈಹಿಕವಾಗಿ... ಮಾನಸಿಕವಾಗಿ... ಆರ್ಥಿಕವಾಗಿ... ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳಕ್ಕೆ ಬಿಟ್ಟರೆ... ಅವರು ಉಪಯೋಗಿಸಿಕೊಳ್ಳೋದನ್ನ ನಿಲ್ಲಿಸಲ್ಲ... ಮುಂದುವರೆಸ್ತಾನೇ ಇರ್ತಾರೆ...
ಆದರೆ ನಾವು ಈ ಕಪ್ಪೆಗಳ ತರಹ ಆಗೋದು ಬೇಡ. ಯಾವಾಗ ಹಾರಬೇಕು ಅನ್ನೋದು ನಮಗೆ ಗೊತ್ತಿರಬೇಕು! ಇನ್ನೂ ಹಾರಕ್ಕೆ ಶಕ್ತಿ ಇರುವಾಗಲೇ ಹಾರಿಬಿಡಬೇಕು.
ಒಳ್ಳೇದಾಗಲಿ!